ಶ್ರವಣಬೆಳಗೊಳ
	ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಒಂದು ಪಟ್ಟಣ ಹಾಗೂ ಜೈನರ ಪವಿತ್ರ ಯಾತ್ರಾಸ್ಥಳ. ಹಾಸನಕ್ಕೆ 51 ಕಿಮೀ ದೂರದಲ್ಲೂ ಚನ್ನರಾಯ ಪಟ್ಟಣಕ್ಕೆ 11 ಕಿಮೀ ದೂರದಲ್ಲೂ ಇದೆ. ಇಲ್ಲಿನ ದೊಡ್ಡ ಬೆಟ್ಟದ ಮೇಲಿರುವ ಗೊಮ್ಮಟ ವಿಗ್ರಹ ಪ್ರಪಂಚಖ್ಯಾತವಾಗಿದೆ. 

	ಈ ಗ್ರಾಮಕ್ಕೆ ಅತಿಪ್ರಾಚೀನವಾದ ಇತಿಹಾಸವಿದೆ. ಶಾಸನಗಳಲ್ಲಿ ಈ ಸ್ಥಳವನ್ನು ಕಟವಪ್ರ, ಕಟಪ್ರ, ಕಟಪ್ಪ, ಕಟ್ವಪ್ಪ, ಕ¿್ಬಪ್ಪ, ಕ¿್ಬಪ್ಪು, ವೆಳ್ಗೊಳ, ಬೆಳ್ಗೊಳ, ಧವಳಸರತೀರ್ಥ, ಶ್ವೇತ ಸರೋವರ ಮುಂತಾಗಿ ಕರೆಯಲಾಗಿದೆ. ಅತಿ ಪ್ರಾಚೀನವಾದ ಸುಮಾರು 6-7ನೆಯ ಶತಮಾನದ ಸಂಸ್ಕøತ ಶಾಸನದಲ್ಲಿ ಕಟವಪ್ರ ಎಂಬ ರೂಪವಿದೆ. ಕಟವಪ್ರ ಶೈಲ, ಕಟ್ವಪ್ರಗಿರಿ ಎಂಬ ರೂಪಗಳು ಅದೇ ಕಾಲದ ಕನ್ನಡ ಶಾಸನಗಳಲ್ಲಿ ಕಂಡುಬಂದಿವೆ. 

	ಕ¿್ವಪ್ಪುವಿನ ಪ್ರಾಚೀನ ರೂಪ ಕಪ್‍ಬೆಳ್ಪು ಎಂದಿದ್ದು ಈ ಮಾತಿಗೆ ಬೆಳ್ಪಿನ ನೀರು ಎಂಬುದೊಂದು ಅಭಿಪ್ರಾಯವಿದೆ. ಆದರೆ ಈ ಹೆಸರು ಅಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ವಿವರಿಸುತ್ತದೆ. ಕ¿್ಬಪ್ಪು ಎಂಬುದು ಕಪ್ಪಾದ ಗುಡ್ಡ, ಕರಿಗುಡ್ಡ ಎಂಬ ಅಲ್ಲಿನ ಪ್ರಾಕೃತಿಕ ಸನ್ನಿವೇಶವನ್ನು ವಿವರಿಸುವಂತಹ ಹೆಸರಾಗಿರಬೇಕು. ಸಂಸ್ಕøತದಲ್ಲಿ ವಪ್ರ ಎಂದರೆ ಗಿರಿ ಎಂದರ್ಥವಾಗುತ್ತದೆ. ಕಟ ಎಂದರೆ ಸಮಾಧಿ ಗುಹೆ, ಸಮಾಧಿ ಮಾಡತಕ್ಕ ಪ್ರದೇಶ. ಇಲ್ಲಿನ 7ನೆಯ ಶತಮಾನದ 54 ಶಾಸನಗಳಲ್ಲಿ 41 ಸಲ್ಲೇಖನ, ಸನ್ಯಸನ ವಿಧಿಗಳಿಂದ ದೇಹ ಮುಡಿಪಿದ ಸಂಗತಿಯನ್ನು ನಿರೂಪಿಸುವ ಜೈನಶಾಸನಗಳು. ಇದನ್ನು ಗಮನಿಸಿ ಕಟವಪ್ರ ಎಂದರೆ ಸಮಾಧಿ ಮರಣ ಹೊಂದಲು ಯೋಗ್ಯವಾದ ಗುಡ್ಡ ಎಂದು ಅರ್ಥೈಸ ಬಹುದು. ಕಟವಪ್ರದ (ಸಮಾಧಿಗುಡ್ಡ) ಕನ್ನಡ ರೂಪಾಂತರ ಕ¿್ವಪ್ಪು ಆಗಿರಬೇಕು. 7ನೆಯ ಶತಮಾನದ ಶಾಸನಗಳೆರಡರಲ್ಲಿ ಈ ಊರಿನ ಹೆಸರು ವೆಳ್ಗೊಳ, ಬೆಳ್ಗೊಳ ಎಂದು ಕರೆದಿದೆ. ಊರಿನ ಮಧ್ಯೆ ಇರುವ ಕೊಳದಿಂದ ಈ ಹೆಸರು (ಬೆಳಕೊಳ-ಬೆಳ್ಗೊಳ) ಬಂದಿರಬೇಕೆಂಬ ಊಹೆಗೆ ಇದು ಪುಷ್ಟಿ ನೀಡುತ್ತದೆ. ಇವುಗಳನ್ನು ಗಮನಿಸಿದಾಗ ಕ¿್ಬಪ್ಪು ಎಂಬುದು ಚಿಕ್ಕಬೆಟ್ಟಕ್ಕೂ ಬೆಳ್ಗೊಳ ಎಂಬುದು ಕೆಳಗಿನ ಊರಿಗೂ ಇದ್ದ ಹೆಸರುಗಳೆನ್ನಬಹುದು. ಶ್ರವಣ ಎಂದರೆ ಜೈನ ಋಷಿ. ಇಲ್ಲಿ ಹಲವಾರು ಜೈನಯತಿಗಳು ನೆಲಸಿದ್ದರು. ಸನ್ಯಸನ ಇತ್ಯಾದಿ ವ್ರತಗಳಿಂದ ಮರಣ ಹೊಂದಿದರು. ಎಂತಲೇ ಇದು ಕಾಲಾನಂತರ ಶ್ರವಣಬೆಳ್ಗೊಳ ಎಂಬ ಹೆಸರನ್ನು ಪಡೆಯಿತು. ಇಲ್ಲಿ ಗೊಮ್ಮಟನ ಮೂರ್ತಿ ಇರುವುದರಿಂದ ಇದು ಗೊಮ್ಮಟಪುರ ವೆಂದೂ ಕರೆಯಲ್ಪಟ್ಟಿತು. 

	ಪ್ರಚಲಿತ ಐತಿಹ್ಯದಂತೆ ಕ್ರಿ.ಪೂ 3ನೆಯ ಶತಮಾನದಲ್ಲಿ ಮೌರ್ಯ ಅರಸನಾದ ಚಂದ್ರಗುಪ್ತನು ತನ್ನ ಗುರುವಾದ ಭದ್ರಬಾಹುವಿನೊಂದಿಗೆ ಬಂದು ಇಲ್ಲಿ ನೆಲೆ ನಿಂತನು. ಇಲ್ಲಿನ ಅತಿ ಪ್ರಾಚೀನವಾದ 7ನೆಯ ಶತಮಾನದ ಶಾಸನದಲ್ಲಿ ಮಹಾವೀರನ ನಿರ್ವಾಣಾನಂತರ ಗೌತಮ ಗಣಧರ ಮೊದಲಾದವರು ಜೈನಗುರುಗಳಾಗಿದ್ದು ಅವರಲ್ಲೊಬ್ಬನಾದ ಭದ್ರಬಾಹುಸ್ವಾಮಿಯು ಉಜ್ಜಯಿನಿಯಲ್ಲಿದ್ದಾಗ ಹನ್ನೆರಡು ವರ್ಷಗಳ ಬರಗಾಲ ದೇಶವನ್ನು ಕ್ಷೋಭೆಗೆ ಒಳಪಡಿಸುತ್ತದೆ ಎಂಬ ಭವಿಷ್ಯವಾಣಿಯನ್ನು ನುಡಿದುದರ ಫಲವಾಗಿ ಸಂಪೂರ್ಣ ಸಂಘವು ಉತ್ತರಾಪಥದಿಂದ ದಕ್ಷಿಣಾಪಥಕ್ಕೆ ವಲಸೆ ಬಂದಿತೆಂದೂ ಇಲ್ಲಿ ಪ್ರಭಾಚಂದ್ರನೆಂಬ ಆಚಾರ್ಯನು ತನ್ನ ಅವಸಾನ ಕಾಲವನ್ನರಿತು ಸಮಾಧಿ ಹೊಂದಬಯಸಿ, ಒಬ್ಬ ಶಿಷ್ಯನೊಡನೆ ಕಟವಪ್ರಗಿರಿಗೆ ಬಂದು ಇಲ್ಲಿ ಜೀವ ತೊರೆದನೆಂದೂ ಹೇಳಿದೆ. ಇಲ್ಲಿ ಹೆಸರಿಸಲಾದ ಭದ್ರ ಬಾಹು, ಪ್ರಭಾಚಂದ್ರ ಹಾಗೂ ಅವನ ಶಿಷ್ಯರನ್ನು ಗುರುತಿಸುವುದರಲ್ಲಿ ಭಿನ್ನಾಭಿ ಪ್ರಾಯಗಳಿವೆ. ಭದ್ರಬಾಹು ಜೈನರ ಶ್ರುತಕೇವಲಿಗಳ ಲ್ಲೊಬ್ಬನೆಂದೂ ಪ್ರಭಾಚಂದ್ರನು ಮೌರ್ಯ ಚಂದ್ರಗುಪ್ತ ನೆಂದೂ ರೈಸ್ ಅವರು ಊಹಿಸಿದರೆ, ಭದ್ರಬಾಹು ಕ್ರಿ.ಪೂ. 30-31ರಲ್ಲಿ ಬಂದ ಇಮ್ಮಡಿ ಭದ್ರಬಾಹುವೆಂದೂ ಚಂದ್ರಗುಪ್ತನು ಆತನ ಶಿಷ್ಯ ನಾದ ಗುಪ್ತಿಗುಪ್ತನೆಂದೂ ಫ್ಲೀಟ್ ಭಾವಿಸಿದ್ದಾರೆ. ಭದ್ರಬಾಹು ಮತ್ತು ಚಂದ್ರ ಗುಪ್ತರು ಶ್ರವಣಬೆಳಗೊಳದ ಚಿಕ್ಕಬೆಟ್ಟದ ಗುಹೆಯಲ್ಲಿ ವಾಸಿಸಿ, ಅಲ್ಲಿಯೇ ತಮ್ಮ ದೇಹ ತೊರೆದರೆಂಬ ನಂಬಿಕೆ 7ನೆಯ ಶತಮಾನದ ವೇಳೆ ಗಾಗಲೇ ದೃಢವಾಗಿ ಬೇರೂ ರಿತ್ತು. ವಾದ ವಿವಾದಗಳೇನಿ ದ್ದರೂ ಇತರ ಶಾಸನಾಧಾರ ಗಳನ್ನವಲಂಬಿಸಿ ಭದ್ರಬಾಹು ಶ್ರುತಕೇವಲಿ ಭದ್ರಬಾಹು ವೆಂದೂ ಚಂದ್ರಗುಪ್ತನು ಮೌರ್ಯ ಚಂದ್ರಗುಪ್ತ ನೆಂದೂ ಮಾಡಿರುವ ಊಹೆ ಹೆಚ್ಚು ಮನನೀಯವಾಗಿ ಕಂಡುಬರುತ್ತದೆ. 

	ಶ್ರವಣಬೆಳಗೊಳದ ಶಾಸನಗಳಿಂದ ನಮಗೆ ಹಲವಾರು ಜೈನಯತಿಗಳ ಪರಿಚಯವಾಗುತ್ತದೆ. ಅವರು ಒಂದಿಲ್ಲೊಂದು ರೀತಿಯಿಂದ ಶ್ರವಣಬೆಳ ಗೊಳದೊಡನೆ ಸಂಬಂಧ ಹೊಂದಿದ್ದವರೇ. ಅವರಲ್ಲಿ ಪದ್ಮನಂದಿ, ಗೃಧ್ರಪಿಚ್ಛ, ಏಕಾಚಾರ್ಯ, ವಕ್ರಗ್ರೀವ ಎಂದೆಲ್ಲ ಕರೆಯಲಾದ ಕೊಂಡಕುಂ ದಾಚಾರ್ಯ ಪ್ರಮುಖನಾದವನು. ಈತ ಪ್ರವಚನಸಾರವೆಂಬ ಕೃತಿಯ ಕರ್ತೃ. ಅರಿಷ್ಟ ನೇಮಿದೇವ, ನಾಗಮತಿಗಂತಿ, ಅಕ್ಷಯಕೀರ್ತಿ ಮೊದಲಾದ ವರು ಕಳಂತೂರು, ನೆಡುಬೋರೆ, ಕಿತ್ತೂರು, ಅಗ¿Âಇನಜ್ಞೂರು ತ¾õÉಕಾಡು ಮುಂತಾದ ಸ್ಥಳಗಳಿಂದ ಹಲವಾರು ಜೈನಯತಿಗಳು ಇಲ್ಲಿಗೆ ಬಂದರು. ಇವರಲ್ಲದೆ ಸಾಮಾನ್ಯ ಪ್ರಜೆಗಳನ್ನೂ ನಾಡಿನ ಅರಸರನ್ನೂ ಈ ಸ್ಥಳ ಆಕರ್ಷಿಸಿತು. ಮೌರ್ಯ ಚಂದ್ರಗುಪ್ತನಿಂದ ಮೈಸೂರಿನ ಒಡೆಯರವರೆಗೂ ಕರ್ನಾಟಕ ಅರಸರೂ ಈ ಪುಣ್ಯಕ್ಷೇತ್ರದಿಂದ ಪ್ರಭಾವಿತರಾಗಿ ಇಲ್ಲಿ ಹಲವಾರು ದಾನಗಳನ್ನು ಮಾಡಿದರು; ದತ್ತಿಗಳನ್ನು ಬಿಟ್ಟರು. ಇಲ್ಲಿನ ಪುಣ್ಯಕಾರ್ಯಗಳಲ್ಲಿ ಪಾಲ್ಗೊಂಡರು. ಗಂಗವಂಶದ ಅರಸರ, ಪ್ರಮುಖವಾಗಿ ಇಮ್ಮಡಿ ಮಾರಸಿಂಹನ ಶಾಸನಗಳು ಇಲ್ಲಿವೆ. ಇಮ್ಮಡಿ ಮಾರಸಿಂಹನ ಪ್ರಶಸ್ತಿ ಇಲ್ಲಿನ ಶಾಸನವೊಂದರಲ್ಲಿದ್ದು ಆತನ ರಾಜಕೀಯ ಸಾಧನೆಗಳು ಅದರಿಂದ ತಿಳಿಯುತ್ತವೆ. ಆತನ ಹಾಗೂ ಆತನ ಅನಂತರ ಬಂದ ಇಮ್ಮಡಿ ರಾಚಮಲ್ಲನ ಮಂತ್ರಿ ಚಾವುಂಡರಾಯನ ವಿಷಯವಾಗಿಯೂ ಸಾಕಷ್ಟು ಸಂಗತಿ ತಿಳಿದುಬರುತ್ತದೆ. ಬ್ರಹ್ಮ ಕ್ಷತ್ರಕುಲೋತ್ಪನ್ನನಾದ ಈತ ಇಲ್ಲಿ ಬಾಹುಬಲಿ ಮೂರ್ತಿಯನ್ನು ಸ್ಥಾಪಿಸಿದ. (ನೋಡಿ- ಚಾವುಂಡರಾಯ-1) ಇವನ ಹೆಸರಿನ ಬಸದಿಯೊಂದು ಚಿಕ್ಕಬೆಟ್ಟದಲ್ಲಿದ್ದರೂ ಅದನ್ನು ಚಾವುಂಡರಾಯನೇ ಕಟ್ಟಿಸಿದನೆನ್ನಲು ಸಾಕಷ್ಟು ಆಧಾರಗಳಿಲ್ಲ. 

	ಶ್ರವಣಬೆಳಗೊಳದ ಖ್ಯಾತಿಗೆ ಕಾರಣರಾದವರಲ್ಲಿ ಹೊಯ್ಸಳ ರಾಣಿಯಾದ ಶಾಂತಲೆಯೂ ಒಬ್ಬಳು. ಈಕೆ ಇಲ್ಲಿನ ಸವತಿಗಂಧವಾರಣ ಬಸದಿಯನ್ನು ಕಟ್ಟಿಸಿದಳು. ಜೊತೆಗೆ, ಹೊಯ್ಸಳರ ಅಧೀನಾಧಿಕಾರಿಗಳಾ ಗಿದ್ದ ಗಂಗರಾಜ, ದಂಡನಾಯಕ ಹುಳ್ಳರಸ, ಏಚರಾಜ, ಚಂದ್ರಮೌಳಿ ಮುಂತಾದವರು ಇಲ್ಲಿ ಬಸದಿಗಳನ್ನು ಕಟ್ಟಿಸಿದರು. ವಿಶೇಷ ದಾನ-ಧರ್ಮಾದಿಗಳನ್ನು ಮಾಡಿದರು. ಏಚನ ಪತ್ನಿ ಪೋಚಿಕಬ್ಬೆ ಮತ್ತು ಸೊಸೆ ಲಕ್ಷ್ಮಿ - ಇವರು ಬಹುಶಃ ಶಾಸನ ಬಸದಿಯನ್ನೂ ಶಿವಭಕ್ತನಾದ ಚಂದ್ರಮೌಳಿಯ ಪತ್ನಿಯೂ ಜಿನಭಕ್ತೆಯೂ ಆದ ಅಚಲದೇವಿಯು ಅಕ್ಕನ ಬಸದಿಯನ್ನೂ ಕಟ್ಟಿಸಿದರು. ಅಭಿನವಚಾರುಕೀರ್ತಿ ಪಂಡಿತಾಚಾರ್ಯರ ಶಿಷ್ಯೆ ಬೆಳುಗೊಳದ ಮಂಗಾಯಿ ತ್ರಿಭುವನಚೂಡಾಮಣಿ ಚೈತ್ಯಾಲಯವೆಂಬ ಮಂಗಾಯಿ ಬಸದಿ ಜಿನಾಲಯವನ್ನು ಕಟ್ಟಿಸಿದಳು. ಗೊಮ್ಮಟೇಶ್ವರನ ಸುತ್ತಾಲಯದ ಇಪ್ಪತ್ನಾಲ್ಕು ತೀರ್ಥಂಕರರನ್ನೂ ಮಾಡಿಸಿದಾತ ವಡ್ಡ ವ್ಯವಹಾರಿಯಾಗಿದ್ದ ಮೊಸಳೆಯ ಬಸವಿಸೆಟ್ಟಿ. 

	ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ ಹಲವಾರು ಬಸದಿಗಳೂ ಇತರ ಧಾರ್ಮಿಕ ಕಟ್ಟಡಗಳೂ ಇವೆ. ಚಂದ್ರಗಿರಿ ಬೆಟ್ಟ ಸಮುದ್ರಮಟ್ಟಕ್ಕೆ 3,052 ಅಡಿ ಎತ್ತರದಲ್ಲಿದೆ. ಇದೇ ಕಟವಪ್ರ ಅಥವಾ ಕ¿್ಬಪ್ಪು. ತೀರ್ಥಗಿರಿ ಅಥವಾ ಋಷಿಗಿರಿ ಎಂದೂ ಇದನ್ನು ಕರೆಯಲಾಗುತ್ತದೆ. ಇಲ್ಲಿನ ಬಸದಿಗಳೆಲ್ಲ ಒಂದು ಗೋಡೆಯ ಆವರಣದೊಳಗಿವೆ. ದ್ರಾವಿಡಶೈಲಿಯಲ್ಲಿ ಕಟ್ಟಲಾದ ಈ ಬಸದಿಗಳಲ್ಲಿ ಒಂದು ಗರ್ಭಗೃಹ, ಸುಕನಾಸಿ,  ನವರಂಗಗಳು ಸಾಮಾನ್ಯವಾಗಿ ಕಂಡುಬಂದಿವೆ. ಶಾಂತಿನಾಥ ಮತ್ತು ಸುಪಾಶ್ರ್ವನಾಥ ಬಸದಿಗಳು ಸಣ್ಣ ಕಟ್ಟಡಗಳು. ಪಾಶ್ರ್ವನಾಥ ಬಸದಿ 59 x 29 ಅಡಿ ವಿಸ್ತಾರವಾಗಿದೆ. ಇದರ ಮುಂದೆ ಎತ್ತರವಾದ ಮಾನಸ್ತಂಭವಿದೆ. ಕತ್ತಲೆ ಬಸದಿ ಇಲ್ಲಿನ ಬಸದಿಗಳಲ್ಲಿ ಹಿರಿದು. ಗರ್ಭಗೃಹ, ಪ್ರದಕ್ಷಿಣಪಥ, ತೆರೆದ ಸುಕನಾಸಿಗೆ ಹೊಂದಿಕೊಂಡ ನವರಂಗ, ಮುಂದೆ ಮುಖಮಂಟಪ ಹಾಗೂ ಅದರ ಮುಂದೆ ಒಂದು ಕೈಸಾಲೆಗಳನ್ನೊಳ ಗೊಂಡ ಈ ಬಸದಿಯನ್ನು, ಕೈಸಾಲೆಯಲ್ಲಿ ಪದ್ಮಾವತಿ ವಿಗ್ರಹವಿರುವುದ ರಿಂದ ಪದ್ಮಾವತಿ ಬಸದಿ ಎಂದೂ ಕರೆಯಲಾಗಿದೆ. ಆದರೆ ಬಸದಿಯ ಒಳಗಿನ ವಿಗ್ರಹ ಆದಿನಾಥನದು. ಈ ತೀರ್ಥಂಕರನ 6 ಅಡಿ ಎತ್ತರದ ಕುಳಿತ ಭಂಗಿಯಲ್ಲಿರುವ ಪ್ರತಿಮೆಯನ್ನು ಈಗಲೂ ಕಾಣಬಹುದು. ಮುಂದಿನ ಮಂಟಪದಲ್ಲಿರುವ ಬಾಗಿಲಿನ ಮೂಲಕ ಮಾತ್ರ ಬೆಳಕು ಬರಬೇಕಾಗಿದ್ದರಿಂದ, ಇದು ಕತ್ತಲೆ ಬಸದಿ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದನ್ನು ಹೊಯ್ಸಳ ವಿಷ್ಣುವರ್ಧನನ ದಂಡನಾಯಕನಾದ ಗಂಗರಾಜ ತನ್ನ ತಾಯಿ ಪೋಚವ್ವೆಗಾಗಿ ಕಟ್ಟಿಸಿದ. 

	ಇಲ್ಲಿನ ಬಸದಿಗಳಲ್ಲೆಲ್ಲ ಕಿರಿದಾದುದು ಚಂದ್ರಗುಪ್ತ ಬಸದಿ. ಒಂದರ ಪಕ್ಕದಲ್ಲೊಂದರಂತೆ ಮೂರು ಗುಡಿಗಳು, ಅದರ ಮುಂದೆ ಇಕ್ಕಟ್ಟಾದ ಕೈಸಾಲೆ, ಮಧ್ಯದ ಗುಡಿಯಲ್ಲಿ ಪಾಶ್ರ್ವನಾಥನ ಹಾಗೂ ಇತರ ಎರಡು ಗುಡಿಗಳಲ್ಲಿ ಪದ್ಮಾವತಿ ಮತ್ತು ಕೂಷ್ಮಾಂಡಿನಿಯರ ವಿಗ್ರಹಗಳಿವೆ. ಕಾಲಾನಂತರ ಬಹುಶಃ 12ನೆಯ ಶತಮಾನದಲ್ಲಿ ಇದರ ಮುಂದೆ ಒಂದು ದ್ವಾರವನ್ನು ಸೇರಿಸಲಾಯಿತು. ಇದು ಕಲಾಕೌಶಲ್ಯದಿಂದ ತುಂಬಿದೆ. ದಾಸೋಜ ಇದರ ರೂವಾರಿ. ಈ ಬಸದಿಯನ್ನು ಮೌರ್ಯರ ಚಂದ್ರಗುಪ್ತ ಕಟ್ಟಿಸಿದನೆಂಬ ಪ್ರತೀತಿಯಿಂದ ಇದಕ್ಕೆ ಆ ಹೆಸರು ಬಂದಿರುವಂತೆ ಕಾಣುತ್ತದೆ.

	ಇನ್ನೊಂದು ಗಮನಾರ್ಹ ಬಸದಿ ಚಾವುಂಡರಾಯನ ಬಸದಿ. ವಾಸ್ತುಶೈಲಿ ಹಾಗೂ ಕಲಾಕೌಶಲ್ಯದ ದೃಷ್ಟಿಯಿಂದ ಇದೊಂದು ಸುಂದರವಾದ ಬಸದಿ. ಇದರ ಮೇಲೆ ಉಪ್ಪರಿಗೆ ಹಾಗೂ ವಿಮಾನಗಳಿವೆ. ಗರ್ಭಗುಡಿಯಲ್ಲಿ ಈಗಿರುವುದು ನೇಮಿನಾಥನ ವಿಗ್ರಹ. ಇದನ್ನು ಚಾವುಂಡರಾಯ ಕಟ್ಟಿಸಿದನೆಂದು ಹೇಳಿದೆಯಾದರೂ ಈ ಊಹೆ ಇನ್ನೂ ಸಂದೇಹಾಸ್ಪದ. ಬಹುಶಃ ಚಾವುಂಡರಾಯನ ಮಗ ಜಿನದೇವಣ ಇದರ ಗರ್ಭಗುಡಿಯನ್ನು ಕಟ್ಟಿಸಿರಬೇಕು. ಬಸದಿಯೊಳಗಡೆ ಈಗ ಇರುವ ನೇಮೀಶ್ವರನ ವಿಗ್ರಹಪೀಠದಲ್ಲಿ ಗಂಗರಾಜನ ಮಗನಾದ ಏಚಣನು ಬೊಪ್ಪಣ ಚೈತ್ಯಾಲಯವೆಂಬ ಜಿನಾಲಯವನ್ನು ಕಟ್ಟಿಸಿದನೆಂದು ಹೇಳಿದೆ. 

	ಬಾಗಿಲ ಬಳಿಯೇ ನಿಲ್ಲಿಸಿರುವ ಶಾಸನಕಲ್ಲಿನಿಂದ ಶಾಸನಬಸದಿ ಎಂಬ ಹೆಸರು ಪಡೆದ ಬಸದಿಯಲ್ಲಿ ಗರ್ಭಗೃಹ, ತೆರೆದ ಸುಕನಾಸಿ, ನವರಂಗಗಳಿವೆ. ಒಳಗಡೆ 5 ಅಡಿ ಎತ್ತರದ ಆದಿನಾಥನ ವಿಗ್ರಹವಿದೆ. ಸುಕನಾಸಿಯಲ್ಲಿ ಗೋಮುಖ ಮತ್ತು ಚಕ್ರೇಶ್ವರಿ ಎಂಬ ಯಕ್ಷಯಕ್ಷಿಯರ ವಿಗ್ರಹಗಳಿವೆ. ಚಂದ್ರಪ್ರಭ ಬಸದಿ, ಮಜ್ಜಿಗಣ್ಣನ ಬಸದಿ, ಎಡರುಕಟ್ಟೆ ಬಸದಿ ಮತ್ತು ಸವತಿಗಂಧವಾರಣ ಬಸದಿಗಳು ಇಲ್ಲಿನ ಇತರ ಬಸದಿಗಳು.  ಕತ್ತಲೆ ಬಸದಿಯ ದಕ್ಷಿಣಕ್ಕೆ ಪೂರ್ವಾಭಿಮುಖವಾಗಿ ನಾಲ್ಕು ಕಂಬಗಳ ಎರಡು ಮಂಟಪಗಳಿದ್ದು ಇದನ್ನು ಮಹಾನವಮಿ ಮಂಟಪ ಎಂದು ಕರೆಯಲಾಗಿದೆ. ಇದರಲ್ಲಿನ ಒಂದು ಕಂಬದ ಮೇಲಿರುವ ಶಾಸನದಲ್ಲಿ 1176 ರಲ್ಲಿ ಮರಣಹೊಂದಿದ ನಯಕೀರ್ತಿ ಎಂಬ ಗುರುವಿನ ಸ್ಮರಣಾರ್ಥವಾಗಿ ಆತನ ಶಿಷ್ಯನಾದ ನಾಗದೇವ ಮಂತ್ರಿ ಅದನ್ನು ಕಟ್ಟಿಸಿದನೆಂದಿದೆ.  ಇಂತಹ ಇತರ ಮಂಟಪಗಳನ್ನು ಚಾವುಂಡರಾಯನ ಬಸದಿ, ಎಡರು ಕಟ್ಟೆ ಬಸದಿ ಮತ್ತು ತೇರಿನ ಬಸದಿಗಳ ಸಮೀಪದಲ್ಲೂ ಕಾಣಬಹುದು.  ಬೆಟ್ಟವನ್ನೇರಿ ಗೋಡೆಯನ್ನು ದಾಟಿ ಬಂದಾಗ ಕಾಣುವುದು ಕೂಗೆ ಬ್ರಹ್ಮದೇವರ ಕಂಬ. ಈ ಕಂಬದ ಮೇಲಿನ ಚೌಕಾಕಾರದ ಮಾಡಿನಲ್ಲಿ ಪೂರ್ವಾಭಿಮುಖವಾಗಿ ಕುಳಿತ ಬ್ರಹ್ಮದೇವರ ವಿಗ್ರಹವಿದೆ.  ಕಂಬದ ಮೇಲಿನ ಶಾಸನದಲ್ಲಿ ಗಂಗರ ಇಮ್ಮಡಿ ಮಾರಸಿಂಹನ ಮರಣದ ಪ್ರಸ್ತಾಪವಿದೆ. ಬಹುಶಃ ಇದು ಸುಮಾರು ಅದೇ ಕಾಲಕ್ಕೆ ಸ್ಥಾಪಿಸಿದ್ದಾಗಿರಬೇಕು.

	ಮಹಾನವಮಿ ಮಂಟಪದ ಪಶ್ಚಿಮಕ್ಕೆ ಬಂಡೆಯೊಂದರಲ್ಲಿ ಮೊಣಕಾಲಿನಿಂದ ಮೇಲ್ಭಾಗಕ್ಕೆ ಕೊರೆಯಲಾದ 9 ಅಡಿಗಳ ಎತ್ತರದ ಭರತನದೆಂದು ಹೇಳಲಾಗುವ ಅಸಂಪೂರ್ಣ ವಿಗ್ರಹವಿದೆ. ಗೋಡೆಯ ಹೊರಗಡೆ ಬ್ರಹ್ಮದೇವನ ಆಲಯವಿದೆ. ಇದೊಂದು ಸಣ್ಣಗುಡಿ. ಒಳಗೆ ಬ್ರಹ್ಮದೇವನ ವಿಗ್ರಹವಿದೆ. ಗುಡಿಯ ಮುಂದಿನ ಬಂಡೆಯ ಮೇಲೆ ಜಿನರನ್ನೂ ಆನೆಗಳನ್ನೂ ಸಾಲಂಕೃತ ಕಂಬಗಳನ್ನೂ ಬಿಡಿಸಲಾಗಿದೆ.  ಭದ್ರಬಾಹು ವಾಸಿಸಿದ್ದನೆನ್ನಲಾದ ಗುಹೆ ಭದ್ರಬಾಹುಗುಹೆ. ಇಲ್ಲಿ ಆ ಆಚಾರ್ಯನ ಪಾದಗಳೆಂದು ಎರಡು ಪಾದಗಳನ್ನು ಕೊರೆದಿದ್ದು ಅವನ್ನು ಈಗಲೂ ಯಾತ್ರಿಕರು ಪೂಜಿಸುತ್ತಾರೆ.                

	ಬ್ರಹ್ಮದೇವರ ಮಂಟಪದಲ್ಲಿ ಮಾನಸ್ತಂಭಕ್ಕೆ ಆನಿಸಿಕೊಂಡು ನಿಂತಿರುವ ಸ್ತ್ರೀವಿಗ್ರಹವೊಂದನ್ನು ಗುಳ್ಳಕಾಯಜ್ಜಿ ಎಂದು ಹೇಳಲಾಗುತ್ತದೆ.  ಈ ವಿಗ್ರಹವನ್ನು ಕರಿಯ ಕಲ್ಲಿನಲ್ಲಿ ಕೆತ್ತಲಾಗಿದೆ. ಇದರ ಎತ್ತರ ಸು. 5 ಅಡಿ. ಕರಿಯ ಬಳಪದಕಲ್ಲಿನ ಈ ವಿಗ್ರಹ, ಕೈಯಲ್ಲಿ ಒಂದು ಗುಳ್ಳವನ್ನು ಹಿಡಿದುಕೊಂಡಿದೆ. ಇದನ್ನು ಪ್ರತಿಷ್ಠಾಪಿಸಿದ ಬಗೆಗೆ ಈ ಪ್ರತಿಮೆಯ ಪೀಠದಲ್ಲಾಗಲಿ, ಇತರತ್ರವಾಗಲೀ ಆಧಾರಗಳಿಲ್ಲ. ಈ ವಿಗ್ರಹದ ಹಿಂಬದಿಯಲ್ಲಿರುವ ಮಾನಸ್ತಂಭ ಮತ್ತು ಅದರ ಮೇಲಿರುವ ಯಕ್ಷನನ್ನು 12ನೆಯ ಶತಮಾನದಲ್ಲಿದ್ದ ಸಚಿವ ಬಲದೇವ ಮಾಡಿಸಿದುದಕ್ಕೆ ಆ ಸ್ತಂಭದ ಮೇಲೆ ಶಾಸನವಿದೆ. ಸಂಪ್ರದಾಯದಂತೆ ಗುಳ್ಳಕಾಯಜ್ಜಿಯ ವಿಗ್ರಹವನ್ನೂ ಈ ಬ್ರಹ್ಮದೇವರ ಕಂಬವನ್ನೂ ಅದರ ಮೇಲಿನ ಮೂರ್ತಿಯನ್ನೂ ಚಾವುಂಡರಾಯ ಮಾಡಿಸಿದುದಾಗಿ ತಿಳಿದುಬರುತ್ತದೆ.  ಚಾವುಂಡರಾಯ ಮಾಡಿಸಿದ ಬ್ರಹ್ಮದೇವರ ಕಂಬವೂ ಬೇರೊಂದು ಇದ್ದು ಅದರ ಮೇಲೆ ಆತನ ಶಾಸನವೂ ಇದೆ. ಗುಳ್ಳಕಾಯಜ್ಜಿಯ ವಿಗ್ರಹವನ್ನು ಚಾವುಂಡರಾಯ ಮಾಡಿಸಿದನೆ ಎಂಬ ವಿಷಯ ಸಂದಿಗ್ಧ.

	ಚಾವುಂಡರಾಯನಿಗೂ ಗುಳ್ಳಕಾಯಜ್ಜಿಗೂ ಸಂಬಂಧಪಟ್ಟಂಥ ಒಂದು ಕಥೆ ಸು. 16ನೆಯ ಶತಮಾನದ ಈಚಿನ ಕೃತಿಗಳಲ್ಲಿ ದೊರೆಯುತ್ತದೆ.  ಚಾವುಂಡರಾಯ ಬಾಹುಬಲಿಯ ಬೃಹತ್‍ಶಿಲಾ ಪ್ರತಿಮೆಯನ್ನು ಮಾಡಿಸಿ ಅದಕ್ಕೆ ಮಸ್ತಕಾಭಿಷೇಕ ಮಾಡಲು ಸಕಲ ಸನ್ನಾಹಗೈದು ಕ್ಷೀರಾಭಿಷೇಕ ವನ್ನು ಪ್ರಾರಂಭಿಸಿದಾಗ ಮೂರ್ತಿಯ ಮಸ್ತಕದ ಮೇಲೆ ಕೊಡಗಟ್ಟಲೆ ಸುರಿದ ಹಾಲು ತೊಡೆಯ ಕೆಳಗೆ ಇಳಿಯಲಿಲ್ಲವಂತೆ. ಆಗ ಖಿನ್ನಮನಸ್ಕ ನಾದ ಚಾವುಂಡರಾಯ ಇದಕ್ಕೆ ಕಾರಣವೇನೆಂದು ತನ್ನ ಗುರುವನ್ನು ಕೇಳಲು ಆ ಗುರುವಿನ ಆದೇಶದ ಮೇರೆಗೆ ಮುದುಕಿಯೊಬ್ಬಳು ಗುಳ್ಳದಲ್ಲಿ ತಂದ ಹಾಲನ್ನು ಅಭಿಷೇಕ ಮಾಡಿಸಿದಾಗ ಆ ಅಲ್ಪಪ್ರಮಾಣದ ಗುಳ್ಳದ ಹಾಲು ಮಸ್ತಕದಿಂದ ಧಾರಾಕಾರವಾಗಿ ಹರಿದು ಮೂರ್ತಿಯ ಪೂರ್ಣ ಮೈ ತೋಯಿಸಿ ಬೆಟ್ಟದಲ್ಲಿ ದಟ್ಟವಾದ ಹಾಲಿನ ತೊರೆಯಾಗಿ ಹರಿಯಿತಂತೆ. ಆ ಕಾರಣದಿಂದ ಆ ಮುದುಕಿ ಗುಳ್ಳಕಾಯಜ್ಜಿ ಎಂದು ಅಂದಿನಿಂದ ಹೆಸರು ಪಡೆದಳಂತೆ.  ಅದೇ ಕಾರಣದಿಂದ ಈ ಸ್ಥಳಕ್ಕೆ ಬಿಳಿಯ ಗುಳ್ಳಕಾಯಿಯ ಸ್ಮರಣಾರ್ಥವಾಗಿ ಬೆಳ್ಗೊಳ ಎಂಬ ಹೆಸರಾಯಿತು.	

(ಎಸ್.ಜೆ.ಆರ್.)

	ದೊಡ್ಡಬೆಟ್ಟಕ್ಕೆ ಇಂದ್ರಗಿರಿ, ವಿಂಧ್ಯಗಿರಿ ಎಂಬ ಹೆಸರುಗಳಿವೆ.  ಇದು ಸಮುದ್ರಮಟ್ಟದಿಂದ ಸು. 1020ಮೀ (3,347ಅಡಿ) ಎತ್ತರವಿದೆ. ಬೆಟ್ಟ ಹತ್ತಲು ಸು.500 ಮೆಟ್ಟಲುಗಳಿವೆ. ಬೆಟ್ಟದ ಮೇಲೆ ಉತ್ತರಾಭಿಮುಖವಾಗಿ ಕಾಯೋತ್ಸರ್ಗಭಂಗಿಯಲ್ಲಿ ನಿಂತಿರುವ 58 ಅಡಿ ಎತ್ತರವುಳ್ಳ ಗೊಮ್ಮಟ ವಿಗ್ರಹ ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಏಕಶಿಲೆಯ ಕಲಾತ್ಮಕವಾದ ಕೃತಿ. ಗಂಭೀರವಾದ ಪ್ರಶಾಂತವಾದ ಮುಖಮುದ್ರೆ, ತಲೆಯಲ್ಲೆಲ್ಲ ಉಂಗುರಗಳಂತೆ ವ್ಯಾಪಿಸಿಕೊಂಡಿರುವ ಗುಂಗುರು ಕೂದಲು, ಪೌರುಷದ ಪ್ರತೀಕವೆಂಬಂತಿರುವ ಭುಜ, ವಿಶಾಲವಾದ ಎದೆ, ನವಿರಾದ ಹೆಬ್ಬೆರಳು, ಹೊರ ಮುಖವಾಗಿರುವಂತೆ ಎರಡು ಹಸ್ತಗಳು, ಸಣ್ಣ ನಡು, ಮೊಣಕಾಲು, ಪಾದ ಇವುಗಳಿಂದ ಇದು ಗಂಭೀರವಾದ ಶಿಲ್ಪಕೃತಿ ಎನಿಸಿದೆ. ತೊಡೆಗಳ ಕೆಳಭಾಗ ಹುತ್ತದಿಂದ ಆವೃತವಾಗಿದೆ.  ಹುತ್ತದಿಂದ ಸರ್ಪಗಳು ಹೊರಬಂದಿವೆ. ಎರಡು ಕಾಲುಗಳನ್ನೂ ತೋಳುಗಳನ್ನೂ ಮಾಧವೀಲತೆ ಸುತ್ತಿಕೊಂಡಿದೆ (ನೋಡಿ: ಗೊಮ್ಮಟೇಶ್ವರ).

	ಬೊಪ್ಪಣಕವಿಯ ಶಾಸನಸ್ಥವಾಗಿರುವ ಗೊಮ್ಮಟಸ್ತುತಿಯಲ್ಲಿ ಗೊಮ್ಮಟನ ಕಥೆ ಹೇಳಿದೆ. ಪುರು ದೇವನ ಇಬ್ಬರು ಮಕ್ಕಳು ಭರತ ಮತ್ತು ಬಾಹುಬಲಿ. ರಾಜ್ಯಕ್ಕಾಗಿ ಇವರ ನಡುವೆ ಉಂಟಾದ ಕದನದಲ್ಲಿ ಬಾಹುಬಲಿ ಜಯಗಳಿಸಿದರೂ ಔದಾರ್ಯದಿಂದ ರಾಜ್ಯವನ್ನು ಅಣ್ಣನಿಗೆ ಒಪ್ಪಿಸಿ ಲೌಕಿಕ ಬಾಳನ್ನು ತ್ಯಜಿಸಿದ, ಕೇವಲಿ ಎನಿಸಿಕೊಂಡ. ಭರತ ಈತನ ಸ್ಮರಣಾರ್ಥವಾಗಿ ಪೌದನಪುರದಲ್ಲಿ ವಿಗ್ರಹವೊಂದನ್ನು ಸ್ಥಾಪಿಸಿದ.  ಆದರೆ ಕಾಲಾನುಕ್ರಮದಲ್ಲಿ ಆ ಪ್ರದೇಶ ಕುಕ್ಕುಟ ಸರ್ಪಗಳಿಂದ ಆವೃತ ವಾಗಿ ಅಲ್ಲಿ ಹೋಗಲು ಅಸಾಧ್ಯವಾಯಿತು. ಬಹುಕಾಲಾನಂತರ ಚಾವುಂಡ ರಾಯ ಅಲ್ಲಿಗೆ ಹೋಗಲಾರದೆ ಈ ಗೊಮ್ಮಟ ವಿಗ್ರಹವನ್ನು ಸ್ಥಾಪಿಸಿದ ನೆಂದು ಈ ಕೃತಿಯಲ್ಲಿ ಹೇಳಿದೆ.  ಇದೇ ಕಥೆ ಅಲ್ಪಸ್ವಲ್ಪ ಬದಲಾವಣೆಗ ಳೊಂದಿಗೆ ದೊಡ್ಡಯ್ಯನ ಭುಜಬಲಿಶತಕ (ಸು. 1550), ಪಂಚಬಾಣನ ಭುಜಬಲಿ ಚರಿತೆ (ಸು. 1614), ಅನಂತಕವಿಯ ಗೊಮ್ಮಟೇಶ್ವರ ಚರಿತೆ (ಸು.1780), ದೇವಚಂದ್ರನ ರಾಜಾವಳೀ ಕಥೆ (ಸು.1838)-ಈ ಮೊದಲಾದ ಕಾವ್ಯಗಳಲ್ಲಿ ಹೇಳಲ್ಪಟ್ಟಿದೆ. ಈ ವಿಗ್ರಹ ಚಾವುಂಡರಾಯನಿಂದ ಸು. 983ರಲ್ಲಿ ಸ್ಥಾಪಿಸಲ್ಪಟ್ಟಿತು. ಗೊಮ್ಮಟ ವಿಗ್ರಹದ ಮುಂದೆ ಒಳ್ಳೆಯ ಕೆತ್ತನೆಯನ್ನೊಳಗೊಂಡ ಮಂಟಪವಿದೆ. ಇದನ್ನು ಸು. 12ನೆಯ ಶತಮಾನದ ಆದಿ ಭಾಗದಲ್ಲಿ ಮಂತ್ರಿ ಬಲದೇವ ಕಟ್ಟಿಸಿದನೆಂದು ತೋರುತ್ತದೆ. ಬಸವಿಸೆಟ್ಟಿ 24 ತೀರ್ಥಂಕರರನ್ನು ಪ್ರತಿಷ್ಠಾಪಿಸಿ ಸುತ್ತಾಲಯದ ಗೋಡೆ ಕಟ್ಟಿಸಿದ (ಸು. 1200). ಸುತ್ತಾಲಯವನ್ನು ಗಂಗರಾಜ ಕಟ್ಟಿಸಿದ.

	ದೊಡ್ಡಬೆಟ್ಟದ ಇತರ ಕಟ್ಟಡಗಳಲ್ಲಿ ಸಿದ್ಧರ ಬಸದಿ ಒಂದು. ಈ ಸಣ್ಣ ಆಲಯದಲ್ಲಿ 3 ಅಡಿ ಎತ್ತರದ ಸಿದ್ಧನ ವಿಗ್ರಹವಿದೆ. ವಿಗ್ರಹದ ಎರಡೂ ಕಡೆ ಎರಡು ಚಿತ್ರಮಯ ಕಂಬಗಳಿದ್ದು ಒಂದೊಂದರಲ್ಲೂ ಕ್ರಮವಾಗಿ ಅರ್ಹದ್ದಾಸ (ಸು. 1398) ಮತ್ತು ಮಂಗರಾಜ (ಸು. 1432) ಎಂಬ ಸಂಸ್ಕøತ ಕವಿಗಳ ಶಾಸನಗಳನ್ನು ಕೆತ್ತಿದೆ. ಗೊಮ್ಮಟಾಲ ಯಕ್ಕೆ ಹೋಗುವ ದ್ವಾರ ಏಕಶಿಲೆಯಲ್ಲಿ ಕೆತ್ತಿದ ಅಖಂಡ ಬಾಗಿಲು.  ಇದರ ಮೇಲಿನ ಹಾಸುಗಲ್ಲಿನಲ್ಲಿ ಆಸೀನಳಾದ ಲಕ್ಷ್ಮಿಯ ವಿಗ್ರಹದ ಸುಂದರವಾದ ಕೆತ್ತನೆ ಇದೆ. ಈ ಬಾಗಿಲನ್ನು ಚಾವುಂಡರಾಯ ಮಾಡಿಸಿದ ನೆಂಬುದು ಸಾಂಪ್ರದಾಯಿಕವಾದ ಹೇಳಿಕೆ. ಇನ್ನೊಂದು ಬಾಗಿಲನ್ನು ಗುಳ್ಳಕಾಯಜ್ಜಿ ಬಾಗಿಲು ಎಂದು ಕರೆಯುತ್ತಾರೆ.  ಇದರ ಬಲಗಡೆ ಇರುವ ಒಂದು ಅಡಿ ಎತ್ತರದ ವಿಗ್ರಹ ಮಲ್ಲಿಸೆಟ್ಟಿಯ ಮಗಳ ಸ್ಮರಣಾರ್ಥವಾಗಿ ಸ್ಥಾಪಿಸಿದರೆಂದು ಅಲ್ಲಿ ಸು. 1300ನೆಯ ವರ್ಷದ ಶಾಸನ ತಿಳಿಸಿದೆ.  ಇನ್ನೊಂದು ಸೂಕ್ಷ್ಮ ಕೆತ್ತನೆಯನ್ನೊಳಗೊಂಡದ್ದು ತ್ಯಾಗದ ಬ್ರಹ್ಮದೇವರ ಕಂಬ. ಇದನ್ನು ಸ್ಥಾಪಿಸಿದಾತನೂ ಚಾವುಂಡರಾಯನೇ. ಈ ಕಂಬದ ಪಶ್ಚಿಮಕ್ಕೆ ಚನ್ನಣ್ಣನ ಬಸದಿ ಇದೆ. 1673 ರಲ್ಲಿ ಚನ್ನಣ್ಣನೆಂಬಾತ ಈ ಬಸದಿಯನ್ನು ಕಟ್ಟಿಸಿದ. ಬಹುಶಃ ಮುಂದಿನ ಮಾನಸ್ತಂಭವನ್ನೂ ಈತನೇ ಸ್ಥಾಪಿಸಿರಬೇಕು. ಇದು ಚಂದ್ರನಾಥನ ಬಸದಿ. ಒದೆಗಲ್ ಬಸದಿಯನ್ನು ತ್ರಿಕೂಟ ಬಸದಿ ಎಂದೂ ಕರೆಯಲಾಗಿದೆ. ಮೂರು ಮುಖಗಳಿಗೆ ಮೂರು ಗುಡಿಗಳಿರುವ ಈ ಬಸದಿ ಎತ್ತರದ ದಿಬ್ಬದ ಮೇಲೆ ಕಟ್ಟಲಾಗಿದ್ದು ಮೇಲಕ್ಕೆ ಏರಲು ಮೆಟ್ಟಲುಗಳಿವೆ.  ಮಧ್ಯದ ಗುಡಿಯಲ್ಲಿ ಆದಿನಾಥನ ಹಾಗೂ ಎಡ, ಬಲ, ಮುಂಬದಿಗಳಲ್ಲಿ ಕ್ರಮವಾಗಿ ನೇಮಿನಾಥ ಮತ್ತು ಶಾಂತಿನಾಥರ ವಿಗ್ರಹಗಳಿವೆ. ಗರ್ಭಗೃಹ, ಸುಕನಾಸಿ ಮತ್ತು ಮುಂದೆ ಮಂಟಪವನ್ನೊಳ ಗೊಂಡ ಚೌವೀಸ ತೀರ್ಥಂಕರ ಬಸದಿಯಲ್ಲಿ ಶಿಲೆಯೊಂದರ ಮೇಲೆ 24 ತೀರ್ಥಂಕರರನ್ನು ಕೆತ್ತಿದೆ. ಇದನ್ನು 1648ರಲ್ಲಿ ಚಾರುಕೀರ್ತಿಪಂಡಿತ, ಧರ್ಮಚಂದ್ರ ಮತ್ತಿತರರು ಪ್ರತಿಷ್ಠಾಪಿಸಿದರು.

	ಶ್ರವಣಬೆಳಗೊಳ ಪಟ್ಟಣ ಈ ಎರಡೂ ಬೆಟ್ಟಗಳ ನಡುವೆ ಇದೆ. ಇಲ್ಲಿ ಈ ಪಟ್ಟಣದ ಹೆಸರಿಗೆ ಕಾರಣವಾದ ಕೊಳ (ಕಲ್ಯಾಣಿ) ಇದೆ. ಇದು ಪ್ರಾಚೀನವಾದ ಕೊಳ. ಮೈಸೂರಿನ ಚಿಕ್ಕದೇವರಾಜ ಒಡೆಯರು (1673-1704) ಇದನ್ನು ಜೀರ್ಣೋದ್ಧಾರ ಮಾಡಿಸಿದರು. ಇದರ ಸುತ್ತಲೂ ಕಲ್ಲಿನ ಗೋಡೆ, ನಾಲ್ಕು ದಿಕ್ಕುಗಳಲ್ಲೂ ಕಲ್ಲಿನ ದ್ವಾರಗಳು, ಅವುಗಳ ಮೇಲೆ ಗೋಪುರಗಳು ಇವೆ. ಬಹುಶಃ ಇವುಗಳೂ ಮೈಸೂರಿನ ಅರಸರ ಕೊಡುಗೆಗಳು.

	ಶ್ರವಣಬೆಳಗೊಳದಲ್ಲಿಯೇ ಹಿರಿದಾದ ಭಂಡಾರಿ ಬಸದಿಯ ವಿಸ್ತೀರ್ಣ 266 x 78 ಅಡಿಗಳು.  ಇದರಲ್ಲಿ ಗರ್ಭಗೃಹ, ಸುಕನಾಸಿ, ನವರಂಗ, ಮುಖಮಂಟಪಗಳಿದ್ದು ಸುತ್ತಲೂ ಪ್ರಾಕಾರವಿದೆ. ಗರ್ಭಗೃಹದಲ್ಲಿ ಒಂದೊಂದೂ 3 ಅಡಿ ಎತ್ತರದ ತೀರ್ಥಂಕರ ವಿಗ್ರಹಗಳಿರುವ ಕಾರಣ ಇದನ್ನು ಚತುರ್ವಿಂಶತಿ ತೀರ್ಥಂಕರ ಬಸದಿ ಎಂದೂ ಕರೆಯಲಾಗಿದೆ.  ಗರ್ಭಗುಡಿಗೆ ಮೂರು ದ್ವಾರಗಳಿವೆ. ಸುಕನಾಸಿಯ ಎಡಭಾಗದಲ್ಲಿ ಪದ್ಮಾವತಿ ಮತ್ತು ಬ್ರಹ್ಮರ ವಿಗ್ರಹಗಳಿವೆ. ನವರಂಗದ ಮಧ್ಯದ ಅಂಕಣದಲ್ಲಿ 10 ಅಡಿ ಚದರದ ಏಕಶಿಲೆ ಕೆಳಗೆ ಹಾಸಿದ್ದು ನಾಲ್ಕೂ ಕಡೆ ಒಂದೊಂದು ಕಂಬವಿದೆ.  ಬಸದಿಯ ಮುಂದೆಯೂ ಅಖಂಡ ಶಿಲೆಯ ಒಂದು ಮಾನಸ್ತಂಭವಿದೆ. ಈ ಬಸದಿಯನ್ನು ಕಟ್ಟಿಸಿದಾತ ಹೊಯ್ಸಳ ಒಂದನೆಯ ನರಸಿಂಹನ ಭಂಡಾರಿಯಾಗಿದ್ದ ಹುಳ್ಳರಸ.  ಎಂತಲೇ ಇದಕ್ಕೆ ಭಂಡಾರಿ ಬಸದಿ ಎಂದು ಹೆಸರು. ಅಕ್ಕನ ಬಸದಿ ಹೊಯ್ಸಳ ಶೈಲಿಯ ಕಟ್ಟಡ. ಗರ್ಭಗೃಹ, ಸುಕನಾಸಿ, ನವರಂಗ ಮತ್ತು ಮಂಟಪಗಳನ್ನೊಳಗೊಂಡ ಈ ಬಸದಿಯಲ್ಲಿ ಪಾಶ್ರ್ವನಾಥನ ವಿಗ್ರಹ ಪ್ರತಿಷ್ಠೆಯಾಗಿದೆ. ಸುಕನಾಸಿಯ ಎರಡು ಕಡೆಯೂ ಜಾಲಂಧ್ರಗಳು, ಧರಣೀಂದ್ರ ಮತ್ತು ಪದ್ಮಾವತಿಯ ವಿಗ್ರಹಗಳು ಇವೆ. ನವರಂಗದಲ್ಲಿ ಮಧ್ಯೆ ನಾಲ್ಕು ಕಪ್ಪುಶಿಲೆಯ ಕಂಬಗಳಿವೆ. ಇದನ್ನು 1181ರಲ್ಲಿ ಚಂದ್ರಮೌಳಿಯ ಪತ್ನಿ ಆಚಿಯಕ್ಕ ಕಟ್ಟಿಸಿದಳು. ಈ ಬಸದಿಯ ಪ್ರಾಕಾರದೊಳಗೆ ಪಶ್ಚಿಮಕ್ಕಿರುವುದು ಸಿದ್ಧಾಂತ ಬಸದಿ. ಇದರಲ್ಲಿನ ಕತ್ತಲೆ ಕೋಣೆಯೊಂದರಲ್ಲಿ ಹಿಂದೆ ಜೈನಸಿದ್ಧಾಂತಕ್ಕೆ ಸಂಬಂಧಿಸಿದ ಗ್ರಂಥಗಳನ್ನಿಟ್ಟಿದ್ದರೆಂಬ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ.  ಅಕ್ಕನ ಬಸದಿಯ ಮಹಾದ್ವಾರದ ಸಮೀಪದಲ್ಲಿ ದಾನಶಾಲೆ ಬಸದಿ ಇದೆ. ಇದರಲ್ಲಿ ಪಂಚಪರಮೇಷ್ಠಿಗಳ ವಿಗ್ರಹವಿದೆ.

	ನಗರ ಜಿನಾಲಯ ಸಾಮಾನ್ಯವಾದ ಕಟ್ಟಡ. ಒಳಗೆ ಅರಿನಾಥನ ವಿಗ್ರಹವಿದೆ. ಇದನ್ನು 1195ರಲ್ಲಿ ಇಮ್ಮಡಿ ಬಲ್ಲಾಳನ ಪಟ್ಟಣಸ್ವಾಮಿಯಾದ ನಾಗದೇವಮಂತ್ರಿ ಕಟ್ಟಿಸಿದ. ನಗರಗಳು (ವರ್ತಕರು) ಇದಕ್ಕೆ ನೀಡಿದ ಬೆಂಬಲದಿಂದ ಇದನ್ನು ನಗರ ಜಿನಾಲಯವೆಂದು ಕರೆಯಲಾಗಿದೆ.  ಮಂಗಾಯಿ ಬಸದಿಯೂ ಸಾಮಾನ್ಯವಾದ ಕಟ್ಟಡವೇ. ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳನ್ನೊಳಗೊಂಡ ಈ ಬಸದಿಯ ನವರಂಗ ದಲ್ಲಿ ವರ್ಧಮಾನನ ವಿಗ್ರಹವಿದೆ.

	ಇಲ್ಲಿರುವ ಏಕೈಕ ಹಿಂದು ದೇವಾಲಯ ಕಾಳಮ್ಮನ ಗುಡಿ. ಇದರ ಗರ್ಭಗೃಹ ಮಾತ್ರ ಕಲ್ಲಿನ ಕಟ್ಟಡ. ಇದರ ಮೇಲೆ ಗಾರೆಯ ಗೋಪುರ ವಿದೆ. ಗುಡಿಯಲ್ಲಿ 21/2 ಅಡಿ ಎತ್ತರದ ಕಾಳಿಯ ವಿಗ್ರಹವಿದೆ.

ಗ್ರಾಮದ ಮಧ್ಯೆ ಜೈನಮಠವಿದೆ. ಚಾವುಂಡರಾಯ ಗೊಮ್ಮಟಮೂರ್ತಿ ಸ್ಥಾಪಿಸಿದಾಗ ಈ ಮಠವನ್ನು ನೆಲೆಗೊಳಿಸಿ ತನ್ನ ಗುರು ನೇಮಿಚಂದ್ರರನ್ನು ಮಠಾಧಿಪತಿಯಾಗಿ ನಿಯಮಿಸಿದನೆಂದು ಹೇಳಲಾಗಿದೆ. ಈ ಮಠದ ಆಚಾರ್ಯರಲ್ಲೊಬ್ಬರಾದ ಚಾರುಕೀರ್ತಿಪಂಡಿತಾಚಾರ್ಯರು ಹೊಯ್ಸಳ ಒಂದನೆಯ ಬಲ್ಲಾಳನ ರೋಗವೊಂದನ್ನು ಗುಣಪಡಿಸಿ ಬಲ್ಲಾಳರಾಯ ಜೀವರಕ್ಷಾಪಾಲ ಎಂಬ ಬಿರುದನ್ನು ಪಡೆದರೆಂದು ಹೇಳಿದೆ. ಮಠದ ಕಟ್ಟಡದಲ್ಲಿ ಮಧ್ಯೆ ತೆರೆದ ಅಂಗಳವಿದೆ. ಹಲವು ದಶಕಗಳ ಹಿಂದೆ ಇದಕ್ಕೆ ಒಂದು ಉಪ್ಪರಿಗೆಯನ್ನೂ ಸೇರಿಸಲಾಗಿದೆ. ಮಠದಲ್ಲಿ ಒಂದೇ ಸಾಲಿನಲ್ಲಿ ಮೂರು ಗರ್ಭಗುಡಿಗಳಿದ್ದು ಅದರಲ್ಲಿನ ವಿಗ್ರಹಗಳು ನಿತ್ಯಪೂ ಜೆಗೆ ಒಳಪಟ್ಟಿವೆ. ಈ ವಿಗ್ರಹಗಳನ್ನು ಅನೇಕ ಭಕ್ತರು ದಾನ ಮಾಡಿರುವ ವಿಷಯ ಅವುಗಳಲ್ಲಿನ ಶಾಸನಗಳಿಂದ ತಿಳಿದುಬರುತ್ತದೆ. ಮಠದ ಗೋಡೆಗಳನ್ನು ಸುಂದರವಾದ ವರ್ಣಚಿತ್ರಗಳು ಅಲಂಕರಿಸಿವೆ.  ಒಂದರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ದರ್ಬಾರಿನ ಚಿತ್ರಣವಿದೆ. ಪಂಚಪರ ಮೇಷ್ಠಿಗಳ, ನೇಮಿನಾಥನ, ಮಠದ ಆಚಾರ್ಯರ, ಪಾಶ್ರ್ವನಾಥನ ಸಮವಸರಣದ ಹಾಗೂ ಇತರ ಧಾರ್ಮಿಕ ವಿಷಯಗಳನ್ನೊಳಗೊಂಡ ಚಿತ್ರಗಳನ್ನು ಕಾಣಬಹುದು.

	12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಪ್ರಸಿದ್ಧವಾದುದು. ಆ ಸಂದರ್ಭದಲ್ಲಿ ದೇಶದ ನಾನಾ ಕಡೆಗಳಿಂದ ಜಿನಭಕ್ತರು ಆಗಮಿಸುತ್ತಾರೆ. 1398ರಷ್ಟು ಹಿಂದೆಯೇ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ ನಡೆದ ವಿಷಯ ಶಾಸನದಿಂದ ತಿಳಿದು ಬರುತ್ತದೆ.  ಅಂದಿನಿಂದ ಇಂದಿನವರೆಗೆ ಇಂಥ ಅನೇಕ ಅಭಿಷೇಕಗಳು ಕಾಲಕಾಲಕ್ಕೆ ನಡೆದಿವೆ.	

(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ